ಶಾಸ್ತ್ರೀ, ಎಸ್ ಜಿ
 	1890-1955. ಕನ್ನಡದ ಹಿರಿಯ ಲೇಖಕರಲ್ಲಿ ಒಬ್ಬರು. ಸೋಸಲೆ ಗರಳಪುರಿ ಶಾಸ್ತ್ರಿ ಇವರ ಪೂರ್ಣ ಹೆಸರು. ಇವರದು ಪಂಡಿತ ಮನೆತನ. ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಬಾಲ್ಯದಲ್ಲಿ ಕನ್ನಡ ಪಾಠ ಹೇಳಿದ ಗರಳಪುರಿ ಶಾಸ್ತ್ರಿ ಇವರ ತಾತ. ವಿದ್ವಾಂಸರಾಗಿದ್ದ ಸೋಸಲೆ ಅಯ್ಯಾಶಾಸ್ತ್ರಿ ಇವರ ತಂದೆ. ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಓದಿ ಬಿ.ಎ. ಪದವಿ ಪಡೆದ ಶಾಸ್ತ್ರಿಗಳು, ಹೆಚ್ಚಿನ ವ್ಯಾಸಂಗಕ್ಕಾಗಿ 1913ರಲ್ಲಿ ಇಂಗ್ಲೆಂಡಿಗೆ ಹೋದರು. ಅಲ್ಲಿಯ ನಾಟಿಂಗ್‍ಹ್ಯಾಮ್‍ನಲ್ಲಿ ರಸಾಯನವಿಜ್ಞಾನದಲ್ಲಿ ಹೆಚ್ಚಿನ ವ್ಯಾಸಂಗಮಾಡಿ ಎಂ.ಎಸ್‍ಸಿ. ಪದವಿಯನ್ನು ಉನ್ನತ ದರ್ಜೆಯಲ್ಲಿ ಗಳಿಸಿಕೊಂಡು ಸ್ವದೇಶಕ್ಕೆ ಹಿಂತಿರುಗಿದರು. ಆಗಿನ ಮೈಸೂರು ಸರ್ಕಾರದ ಸಾಬೂನು ಕಾರ್ಖಾನೆಯಲ್ಲಿ ಮುಖ್ಯಾಧಿಕಾರಿಗಳಾಗಿ ನೇಮಕಗೊಂಡ ಇವರು ಆ ಕಾರ್ಖಾನೆಯ ಅಭಿವೃದ್ಧಿಗಾಗಿ ಶ್ರಮಿಸಿದರು. ಲಂಡನ್ನಿನಲ್ಲಿ 1924ರಲ್ಲಿ ನಡೆದ ಬ್ರಿಟಿಷ್ ಸಾಮ್ರಾಜ್ಯ ವಸ್ತುಪ್ರದರ್ಶನದಲ್ಲಿ ಇವರು ಭಾರತವನ್ನು ಪ್ರತಿನಿಧಿಸಿದ್ದರು. ಸರ್ಕಾರದ ವಾಣಿಜ್ಯ ಇಲಾಖೆಯ ಮುಖ್ಯಸ್ಥರಾಗಿಯೂ ಕಾರ್ಯ ನಿರ್ವಹಿಸಿದರು. 1944ರಲ್ಲಿ ವಿಶ್ರಾಂತರಾದರು.

	ಸಾಹಿತ್ಯಪ್ರಿಯರೂ ಕಲಾಭಿಮಾನಿಗಳೂ ಆಗಿದ್ದ ಶಾಸ್ತ್ರಿಗಳು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಒಳ್ಳೆಯ ಪರಿಶ್ರಮ ಸಂಪಾದಿಸಿ ಕೊಂಡಿದ್ದರು. ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಅಮೆಚ್ಯೂರ್ ಡ್ರಮ್ಯಾಟಿಕ್ ಅಸೋಸಿಯೇಷನ್ ಮುಂತಾದ ಸಾಂಸ್ಕøತಿಕ ಸಂಸ್ಥೆಗಳೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದ ಇವರು ಸಾಹಿತ್ಯಕೃಷಿಯನ್ನು ಮಾಡಿದ್ದಾರೆ. ಇದ್ದರೂ ಇರಬಹುದು(1946) ಮತ್ತು ಪರಪುರುಷ(1932)-ಇವು ಇವರ ಎರಡು ಕಥಾ ಸಂಕಲನಗಳು. ಸಾಕ್ರೆಟಿಸನ ಮರಣ(1932); ಸೂತ್ರದ ಬೊಂಬೆ(1936); ಮೊನ್ನ-ವನ್ನ(1952); ಲಿಯೊನಾರ್ಡ್(1955) - ಇವು ಇವರು ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿಸಿರುವ ನಾಟಕಗಳು.      					
			(ಎಮ್.ವಿ.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ